
ಶಿವಮೊಗ್ಗ: ಶಿಕಾರಿಪುರ ತಾಲೂಕಿನ ಭದ್ರಾಪುರದಲ್ಲಿ ಅಕ್ರಮವಾಗಿ ನಾಡ ಬಂದೂಕು ತಯಾರಿಸುತ್ತಿರುವ ಮಾಹಿತಿ ಮೇರೆಗೆ ಆರೋಪಿ ಕಾರ್ಪೆಂಟರ್ ಲಕ್ಷ್ಮಣಪ್ಪ ಎಂಬ ವ್ಯಕ್ತಿಯನ್ನು ಶಿಕಾರಿಪುರ ಪೊಲೀಸರು ಬಂಧಿಸಿದ್ದಾರೆ.
ವೃತ್ತಿಯಲ್ಲಿ ಕಾರ್ಪೆಂಟರ್ ಕೆಲಸ ಮಾಡಿಕೊಂಡಿದ್ದ ಲಕ್ಷ್ಮಣಪ್ಪ ತನ್ನ ಬಿಡುವಿನ ವೇಳೆಯಲ್ಲಿ ಬಂದೂಕುಗಳನ್ನು ತಯಾರಿಸುತ್ತಿದ್ದ. ಆರೋಪಿ ಸಿಂಗಲ್ ಬ್ಯಾರಲ್ ನ 7 ಬಂದೂಕುಗಳನ್ನು ತಯಾರಿಸಿಟ್ಟಿದ್ದ. ಆರೋಪಿ ಲಕ್ಷ್ಮಣಪ್ಪ ತನ್ನ ಮನೆಯ ಪಕ್ಕದ ಹಳೆ ಮನೆಯಲ್ಲಿ ಬಂದೂಕು ತಯಾರಿಸುತ್ತಿದ್ದ. ಲಕ್ಷ್ಮಣಪ್ಪ ಬಾತ್ಮಿದಾರರಿಂದ ಮಾಹಿತಿ ಪಡೆದು ದಾಳಿ ಮಾಡಿದ ಶಿಕಾರಿಪುರ ಪೊಲೀಸರು, ದಾಳಿ ವೇಳೆ 7 ನಾಡ ಬಂದೂಕುಗಳು, ತಯಾರಾಗುತ್ತಿದ್ದ ಬಂದೂಕಿನ ವಸ್ತುಗಳ ಜಪ್ತಿ ಮಾಡಿದ್ದಾರೆ.
ಬಂದೂಕು ತಯಾರಿಸಲು ಬಳಸುತ್ತಿದ್ದ ವಸ್ತುಗಳನ್ನು ವಶಕ್ಕೆ ಪಡೆದ ಪೊಲೀಸರು ಶಸ್ತ್ರಾಸ್ತ್ರ ತಿದ್ದುಪಡಿ ಕಾಯ್ದೆಯಡಿ ಲಕ್ಷ್ಮಣಪ್ಪ ವಿರುದ್ಧ ಕೇಸು ದಾಖಲು ಮಾಡಿದ್ದು ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದೆ.





