
ಬೆಂಗಳೂರು: ವಿದೇಶದಿಂದ ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಜಾರಿ ನಿರ್ದೇಶನಾಲಯ (ಇಡಿ) ತನಿಖೆ ನಡೆಸಿದ್ದು, ಪ್ರಮುಖ ಆರೋಪಿ ನಟಿ ಹರ್ಷವರ್ಧಿನಿ ರನ್ಯಾ ಅಲಿಯಾಸ್ ರನ್ಯಾ ರಾವ್ ಮತ್ತು ಸಹ ಆರೋಪಿಗಳಾದ ತರುಣ್ ಕೊಂಡೂರು, ಸಾಹಿಲ್ ಸಖಾರಿಯಾ ಜೈನ್ ವಿರುದ್ಧ ಬೆಂಗಳೂರಿನ ಪಿಎಂಎಲ್‌ಎ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದೆ.
ಒಂದೇ ವರ್ಷದಲ್ಲಿ ರನ್ಯಾ 1.27 ಕ್ವಿಂಟಲ್ ಚಿನ್ನ ಸ್ಮಗ್ಲಿಂಗ್ ಮಾಡಿದ್ದಾರೆ. ಕಪ್ಪು ಹಣ ವೈಟ್ ಮಾಡಲು ಕೆಲ ಸಂಸ್ಥೆಗಳ ಬಳಕೆ ಮಾಡಲಾಗಿದೆ. ಹವಾಲಾ ಜಾಲದ ಮೂಲಕ ನಟಿ ರನ್ಯಾ ಹಣ ಪಡೆದಿದ್ದರು ಎಂದು ಇಡಿ ದೋಷಾರೋಪ ಪಟ್ಟಿ ಸಲ್ಲಿಸಿದೆ.
ವಿದೇಶದಿಂದ ಚಿನ್ನವನ್ನು ಖರೀದಿಸಿ ರನ್ಯಾ ಭಾರತಕ್ಕೆ ತರುತ್ತಿದ್ದರು. ಪರಿಚಿತರು, ರಾಜ್ಯದ ಆಭರಣ ವ್ಯಾಪಾರಿಯ ಮೂಲಕ ಚಿನ್ನ ಮಾರಾಟ ಮಾಡುತ್ತಿದ್ದರು. ಹವಾಲಾ ಮಾರ್ಗದಲ್ಲಿ ಹಣ ಪಡೆಯುತ್ತಿದ್ದರು. ಅದು ಸಕ್ರಮ ಹಣ ಎಂದು ಬಿಂಬಿಸಲು ಬ್ಯಾಂಕ್ ಖಾತೆ, ಸಂಸ್ಥೆ ಬಳಕೆ ಮಾಡಿಕೊಂಡಿದ್ದರು ಎಂದು ನ್ಯಾಯಾಲಯಕ್ಕೆ ಇಡಿ ಮಾಹಿತಿ ನೀಡಿದೆ.





