--Ads--

ಪೊಲೀಸ್ ಇಲಾಖೆಗೆ ಸೇರಲು ಪ್ರೇರಣೆ : ಸಂಜೀವ್ ಕುಮಾರ್ ನಾಯಕ್ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹೆಬ್ಬಗೋಡಿ ಪೊಲೀಸ್ ಠಾಣೆ

On: February 22, 2026 9:22 AM
Follow us on:
--ಜಾಹೀರಾತು--

Whatsapp Channel

Join Now

Telegram Group

Join Now

ಸೋಲೆಂಬ ರೋಗಕ್ಕೆ ಕಠಿಣ ಪರಿಶ್ರಮ ಮತ್ತು ಅತ್ಮವಿಶ್ವಾಸವೇ ಮದ್ದು ಎಂದು ಮುನ್ನುಗ್ಗಿದವರಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ. ಸತತ ಸೋಲು ಕಂಡರೂ ಛಲ ಬಿಡದೆ ಪ್ರಯತ್ನಿಸಿದರೆ ತಮ್ಮ ಕನಸು ನನಸಾಗಿಸಿಕೊಳ್ಳಬಹುದು ಎಂಬುದಕ್ಕೆ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಸಂಜೀವ್ ನಾಯಕ್ ಯುವ ಸ್ಪರ್ಧಾರ್ಥಿಗಳಿಗೆ ಮಾದರಿಯಾಗಿ ನಿಂತಿದ್ದಾರೆ.

ಇವರು ಮೂಲತಃ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಗದ್ದನಕೇರಿ ಗ್ರಾಮದ ತಾಂಡಾದವರು. ಇವರ ತಂದೆ ಮೇಘನಾಥ, ತಾಯಿ ಕಾಶೀಬಾಯಿ, ಮೂಲತಃ ರೈತಾಪಿ ಕುಟುಂಬದ ಸಂಜೀವ್ ನಾಯಕ ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡು ಅಣ್ಣನ ಆಶ್ರಯದಲ್ಲಿ ಬೆಳೆದ ನಾಲ್ಕು ಮಕ್ಕಳಲ್ಲಿ ಎರಡನೆಯವರು. ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಿನಲ್ಲೇ ಪಡೆದು ಬಾಗಲಕೋಟೆಯ ಮೊರಾರ್ಜಿ ದೇಸಾಯಿ ವಸತಿಶಾಲೆಯಲ್ಲಿ ಪ್ರೌಢ ಶಿಕ್ಷಣ ಮುಗಿಸಿದರು. ತದನಂತರ ಪಿಯುಸಿ ಸೈನ್ಸ್ ಹಾಗೂ ಇಂಜಿನಿಯರಿಂಗ್ ಪದವಿಯನ್ನು ಸರಕಾರಿ ವಿದ್ಯಾಲಯದಲ್ಲಿ ಪೂರ್ಣಗೊಳಿಸಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಗಾಗಿ ಸಮಾಜ ಕಲ್ಯಾಣ ಅಭಿವೃದ್ಧಿ ನಿಗಮದಿಂದ ಯುಪಿಎಸ್ಸಿ ತರಬೇತಿಗಾಗಿ ಉಚಿತ ಕೋಚಿಂಗ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ವಿದ್ಯಾರ್ಥಿ ವೇತನದೊಂದಿಗೆ ದೆಹಲಿಯ ಶ್ರೀರಾಮ್ ಕೋಚಿಂಗ್ ಅಕಾಡಮಿಯಲ್ಲಿ ಒಂದು ವರ್ಷ ತರಬೇತಿ ಪಡೆದರು. ಬಳಿಕ ಧಾರವಾಡದಲ್ಲಿ ಸ್ವಯಂಪ್ರೇರಣೆಯಿಂದ 6 ತಿಂಗಳ ಅವಧಿ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವ ವೇಳೆ ಹಣದ ಕೊರತೆಯಿಂದ ಊಟ. ಅಧ್ಯಯನ ಪಠ್ಯಪುಸ್ತಕಗಳ ಖರೀದಿಗಾಗಿ ಇನ್ನಿಲ್ಲದ ತೊಂದರೆ ಎದುರಿಸಿದರು.

ಎಂಜಿನಿಯರಿಂಗ್ ಅಧ್ಯಯನ ಮಾಡುತ್ತಿರುವಾಗಲೇ ಸ್ಪರ್ಧಾತ್ಮಕ ಪರೀಕ್ಷೆಗಳತ್ತ ಆಸಕ್ತಿ ತೋರಿದ ಇವರು ಎಂಜಿನಿಯರಿಂಗ್ ಮುಗಿಯುತ್ತಿದ್ದಂತೆ ಉನ್ನತ ಹುದ್ದೆಗೆ ಪಡೆಯುವ ಕನಸು ಕಂಡರು. 2014ರಲ್ಲಿ ಪಿಎಸ್‌ಐ ಹುದ್ದೆಗೆ ನೋಟಿಫಿಕೇಷನ್ ಕರೆದಾಗ ಪೇಪರ್ ಒನ್ ಪರೀಕ್ಷೆ ಸಮರ್ಥವಾಗಿ ಎದುರಿಸಲು ವಿಫಲರಾದರು. ಛಲದಂಕ ಮಲ್ಲನಂತೆ ಪುನಃ 2016ರಲ್ಲಿ ಎರಡನೇ ಬಾರಿಗೆ ಪಿಎಸ್‌ಐ ಪರೀಕ್ಷೆ ಜತೆ ಸುಮಾರು ವಿವಿಧ ಹುದ್ದೆಗಳಿಗಾಗಿ ಪರೀಕ್ಷೆ ಬರೆದರು. ಅದರಲ್ಲಿ ನಾಲ್ಕು ಸರಕಾರಿ ಹುದ್ದೆಗಳಿಗೆ ಆಯ್ಕೆಯಾದರು. ಪಿಎಸ್‌ಐ ಆಗಿ ಸಾರ್ವಜನಿಕ ಸೇವೆ ಸಲ್ಲಿಸುವುದನ್ನೇ ಗುರಿಯಾಗಿಟ್ಟುಕೊಂಡು 2016ರಲ್ಲಿ ಪರೀಕ್ಷೆ ಹಾಗೂ ಸಂದರ್ಶನ ಎದುರಿಸಿ ತಮ್ಮ ಕನಸು ನನಸಾಗಿಸಿಕೊಂಡರು. 2017ರಲ್ಲಿ ಬೆಂಗಳೂರಿನ ಬ್ಯಾಟರಾಯನಪೂರ ಪೊಲೀಸ್ ಠಾಣೆಗೆ ಪಿಎಸೈ ಆಗಿ ನಿಯೋಜನೆಯಾದ ನಂತರ 5 ವರ್ಷ ಸೇವೆ ಸಲ್ಲಿಸಿದರು. ತದನಂತರ 2022ರಲ್ಲಿ ಸಿಟಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ 2 ವರ್ಷ ಕಾರ್ಯನಿರ್ವಹಿಸಿದರು. 2024ರಲ್ಲಿ ಸಾಮಾಜಿಕ ಮಾಧ್ಯಮ ವಿಭಾಗದಲ್ಲಿ ಒಂದು ವರ್ಷ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಹೆಬ್ಬಗೋಡಿ ಪೊಲೀಸ್ ಠಾಣಾ ಸಬ್ ಇನ್ಸ್‌ಪೆಕ್ಟ‌ರ್ ಯಾಗಿರುವ ಸಂಜೀವ್ ನಾಯಕ್ ಅವರು ಆರಕ್ಷಕ  ಟೈಮ್ಸ್ ಮೀಡಿಯಾಯೊಂದಿಗೆ ಮುಖಾಮುಖಿಯಾಗಿದ್ದಾರೆ.

1)ಪೊಲೀಸ್ ಹುದ್ದೆ / ಇಲಾಖೆಗೆ ಬರಬೇಕೆಂದು ಅನಿಸಿದ್ದು, ಏಕೆ ಅದಕ್ಕೆ ಕಾರಣವೇನು.?

ಮನೆಯಲ್ಲಿ ಬಡತನವಿದ್ದ ಕಾರಣ ಯಾವುದಾದರೂ ಕೆಲಸ ಮಾಡಬೇಕಾದ ಅನಿವಾರ್ಯತೆ ಇತ್ತು. ಆದರೆ ಓದಿನಲ್ಲಿ ಮುಂದಿದ್ದ ನಾನು ಹೆಚ್ಚಿನ ವಿದ್ಯಾಭ್ಯಾಸ ಮಾಡಿದರೆ ಉನ್ನತ ಹುದ್ದೆ ಪಡೆದುಕೊಳ್ಳಬಹುದು ಎಂಬ ಭರವಸೆ ಇತ್ತು. ಪೊಲೀಸ್ ಕಾನಸ್ಟೇಬಲ್ ಆಗಿದ್ದ ಅಣ್ಣ ಹಾಕಿಕೊಳ್ಳುತ್ತಿದ್ದ ಸಮವಸ್ತ್ರ ನೋಡಿ ಪೊಲೀಸ್ ಆಗಬೇಕೆಂಬ ಆಸೆ ಹುಟ್ಟಿತ್ತು ಹಾಗೂ ಅಣ್ಣನ ಪ್ರೇರಣಾದಾಯಕ ಮಾತುಗಳು ಪೊಲೀಸ್ ಇಲಾಖೆಗೆ ಸೇರಿಕೊಳ್ಳಲು ಸ್ಫೂರ್ತಿ ನೀಡಿದವು.

ಸಮಾಜ ಕಲ್ಯಾಣ ಇಲಾಖೆ ಅಭಿವೃದ್ಧಿ ನಿಗಮದಿಂದ ಯುಪಿಎಸ್ಸಿ ಪ್ರೀ ಕೋಚಿಂಗ್ ಪರೀಕ್ಷೆಯಲ್ಲಿ ಪಾಸಾಗಿ ದೆಹಲಿಯಲ್ಲಿ ವಿದ್ಯಾರ್ಥಿವೇತನದೊಂದಿಗೆ ತರಬೇತಿ ಪಡೆದುಕೊಂಡೆ. ದೆಹಲಿಯಲ್ಲಿ ಸೀನಿಯರ್‌ಗಳನ್ನು ನೋಡಿದಾಗ ಒಳ್ಳೆಯ ಹುದ್ದೆ ಪಡೆದುಕೊಳ್ಳಬೇಕು ಎಂದೆನಿಸಿತು. ಆಗಾಗ ಐಎಎಸ್, ಐಪಿಎಸ್ ಅಧಿಕಾರಿಗಳನ್ನು ನೋಡಿದಾಗ ಯುಪಿಎಸ್ಸಿ, ಕೆಪಿಎಸ್ಸಿ, ಪರೀಕ್ಷೆ ಪಾಸ್ ಮಾಡಬಹುದೆಂಬ ನಂಬಿಕೆ ಮೂಡಿತು. ಆಗ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಧ್ಯಯನ ಮಾಡಲು ಶುರುಮಾಡಿದೆ. ಅಂದುಕೊಂಡಂತೆ ಸತತ ಪ್ರಯತ್ನ ಹಾಗೂ ಅಧ್ಯಯನ ಮಾಡಿದ್ದರಿಂದ ಈಗ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಆಗಿದ್ದೇನೆ.

2) ಪಿಎಸ್‌ಐ ಹುದ್ದೆಗೆ ನಿಮ್ಮ ತಯಾರಿ ಹೇಗಿತ್ತು.?

ಪಿಎಸ್‌ಐ ಪರೀಕ್ಷೆಗೆ ನಿರ್ದಿಷ್ಟವಾಗಿ ಯಾವುದೇ ರೀತಿಯ ಕೋಚಿಂಗ್ ಪಡೆದುಕೊಂಡಿಲ್ಲ. ಎಂಜಿನಿಯರಿಂಗ್ ಅಧ್ಯಯನದ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದೆ. ನಾನು ಹಾಕಿಕೊಂಡ ವೇಳಾಪಟ್ಟಿಯಂತೆ ದಿನಕ್ಕೆ ನಾಲೈದು ಗಂಟೆ ಅಧ್ಯಯನ ಮಾಡುತ್ತಿದೆ. ಇದರ ಜೊತೆಗೆ ದಿನಪತ್ರಿಕೆಗಳಾದ ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್ ಹಾಗೂ ಸ್ಪರ್ಧಾ ವಿಜೇತ ಮ್ಯಾಗಜಿನ್ ಓದುತ್ತಿದೆ. ಅದರಲ್ಲಿ ಪ್ರಚಲಿತ ಘಟನೆಗಳ ಬಗ್ಗೆ ಸಣ್ಣ ಚೀಟಿ ಮಾಡಿಟ್ಟುಕೊಂಡು ಪದೇ ಪದೆ ಪುನರ್ ಮನನ ಮಾಡಿ ಬರದಿಟ್ಟುಕೊಳ್ಳುತ್ತಿದ್ದೆ. ಜತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಹಿಂದಿನ ವರ್ಷದ ಪ್ರಶ್ನೆಪತ್ರಿಕೆ ಬಿಡಿಸುವುದು. ಆಗಾಗ ಸ್ನೇಹಿತರ ಜೊತೆ ಸೇರಿ ಅಧ್ಯಯನ ಮಾಡಿದ್ದರಿಂದ ಪಿಎಸ್‌ಐ ಹುದ್ದೆ ಪಡೆಯಲು ಸಾಧ್ಯವಾಯಿತು.

3) ಪೊಲೀಸ್ ಕಾನ್‌ಸ್ಟೇಬಲ್ ಅಥವಾ ಪಿಎಸ್‌ಐ ಪರೀಕ್ಷೆಗೆ ಅಭ್ಯರ್ಥಿಗಳು ಹೇಗೆ ತಯಾರಿ ನಡೆಸಿದರೆ ಸೂಕ್ತ.?

ಪೊಲೀಸ್ ಹುದ್ದೆಗೆ ತಯಾರಿ ನಡೆಸುವ ಪ್ರತಿಯೊಬ್ಬ ಅಭ್ಯರ್ಥಿಯೂ ಮೊದಲು ಗುರಿಯನ್ನು ಸ್ಪಷ್ಟವಾಗಿ ನಿರ್ಧರಿಸಬೇಕು. ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗೂ ಪಠ್ಯಕ್ರಮವಿದ್ದು, ಅದನ್ನು ತಿಳಿದುಕೊಳ್ಳಬೇಕು. ಪಠ್ಯಕ್ರಮದಂತೆ ಹಳೆಯ ಪ್ರಶ್ನೆ ಪತ್ರಿಕೆಗಳನ್ನು ವಿಶ್ಲೇಷಣೆ ಮಾಡಬೇಕು. ಮೂಲ ಪುಸ್ತಕಗಳು ಮತ್ತು ಉಲ್ಲೇಖಿತ ಪುಸ್ತಕಗಳು ಅಧ್ಯಯನ ಮಾಡಿದರೆ ಅಂದುಕೊಂಡ ಹುದ್ದೆ ಪಡೆಯಬಹುದು. ಜತೆಗ ಪರೀಕ್ಷೆಗೆ ಯಾವುದನ್ನೂ ಓದಬೇಕು ಹಾಗೂ ಯಾವುದನ್ನು ಓದಬಾರದು ಎನ್ನುವುದೂ ಮುಖ್ಯ..

4) ಇಂದಿನ ಸ್ಪರ್ಧಾರ್ಥಿಗಳಿಗೆ ಕೋಚಿಂಗ್ ಅವಶ್ಯಕತೆ ಇದೆಯೆ.?

ನನ್ನ ಅನಿಸಿಕೆ ಪ್ರಕಾರ ಪ್ರಸ್ತುತ ಸ್ಪರ್ಧಾರ್ಥಿಗಳಿಗೆ ಕೋಚಿಂಗ್ ಅವಶ್ಯಕತೆ ಇದೆ. ಹಿಂದೆಲ್ಲಾ ಸ್ಪರ್ಧೆ ಕಡಿಮೆಯಿತ್ತು. ಹಾಗಾಗಿ ಸ್ವಲ್ಪ ಕಷ್ಟ ಪಟ್ಟು ಓದಿದರೆ ಹುದ್ದೆ ಪಡೆಯಬಹುದಿತ್ತು. ಈಗ ಸ್ಪರ್ಧಾರ್ಥಿಗಳು ಸ್ವಯಂ ಪ್ರೇರಣೆಯಿಂದ ಎಷ್ಟು ಓದಿದರೂ ಗುರಿಸಾಧನೆ ಕಷ್ಟವಾಗುತ್ತಿದೆ. ಕೋಚಿಂಗ್ ಅಥವಾ ಮಾರ್ಗದರ್ಶನ ಪಡೆಯುವುದು ಇಂದು ತುಂಬಾ ಮುಖ್ಯವಾಗುತ್ತದೆ.

5) ಸ್ಪರ್ಧಾರ್ಥಿಗಳು ಆನ್‌ಲೈನ್ ಅಥವಾ ಆಫ್‌ಲೈನ್ ಕೋಚಿಂಗ್ ಯಾವುದನ್ನು ಪಡೆದುಕೊಳ್ಳವುದು ಉತ್ತಮ.?

ಆಫ್‌ಲೈನ್ ಕೋಚಿಂಗ್‌ನಲ್ಲಿ ನೇರವಾಗಿ ಸಂವಹನ ನಡೆಯುತ್ತದೆ. ನೇರವಾಗಿ ಪ್ರಶ್ನೆ ಕೇಳಿ ಸಾಕಷ್ಟು ಮಾಹಿತಿ ಪಡೆದುಕೊಳ್ಳಲು ಅವಕಾಶವಿರುತ್ತದೆ. ಆನ್‌ಲೈನ್ ಕೋಚಿಂಗ್ ಹಣ ಮತ್ತು ಸಮಯ ಉಳಿಸುತ್ತದೆ ಹೊರತು ಅಷ್ಟೊಂದು ಜ್ಞಾನ ಪಡೆಯಲು ಸೂಕ್ತವಲ್ಲ. ಆಫ್ ಲೈನ್ ಕೋಚಿಂಗ್ ಪಡೆಯುವುದು ಒಳ್ಳೆಯ ನಿರ್ಧಾರ ಎನ್ನುವುದು ನನ್ನ ಅಭಿಪ್ರಾಯ.

6) ನೀವು ಇಲ್ಲಿಯವರೆಗೆ ಪಡೆದಕೊಂಡ ಹುದ್ದೆಗಳು ಯಾವುವೂ.?

ಹಲವು ಬಾರಿ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿ ವಿಫಲತೆಗಳನ್ನು ಕಂಡ ಬಳಿಕವೂ ಯಶಸ್ಸು ಪಡೆಯಲು ಸಾಕಷ್ಟು ಪ್ರಯತ್ನ ನಡೆಸಿದ್ದೇನೆ. ಅದರ ಫಲವಾಗಿ ಇಲ್ಲಿಯವರೆಗೆ ಒಟ್ಟು ಹುದ್ದೆ ಪಡೆದಿದ್ದಾನೆ. KSRP PSI, CIVIL PSI, WIRELESS PSI, KSISF PSI, COMMERCIAL TAX INSPECTOR, FDA, RAILWAY STATION MASTER,ಇವುಗಳು ನನ್ನ ಕನಸು  ಸಿವಿಲ್ ಪಿಎಸ್‌ಐ ಹುದ್ದೆ ಆಯ್ಕೆ ಮಾಡಿಕೊಂಡು ಕಾರ್ಯನಿರ್ವಹಿಸುತ್ತಿದ್ದೇನೆ.

7) ಪರೀಕ್ಷೆ ವಿಫಲತೆ ಎದುರಾದಾಗ ನಿಮ್ಮನ್ನು ನೀವು ಹೇಗೆ ಪ್ರೇರಣೆಸಿಕೊಂಡೀರಿ, ?

ಪದೇ ಪದೇ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ವಿಫಲನಾದಾಗ ಓದು ನಿಲ್ಲಿಸಿ ಬೆಂಗಳೂರಿನ ಟಾಟಾ ಟೆಲಿ ಸರ್ವಿಸ್ ಲಿಮಿಟೆಡ್‌ನಲ್ಲಿ ಎಂಜಿನಿಯರ್ ಹುದ್ದೆಗೆ ಸೇರಿಕೊಂಡೆ. ಒಬ್ಬ ಖಾಸಗಿ ಮುಖ್ಯಸ್ಥನ ಕೈ ಕೆಳಗೆ ಕಾರ್ಯನಿರ್ವಹಿಸುವುದು ಮನಸ್ಸಿಗೆ ಬೇಸರ ಉಂಟು ಮಾಡಿತು. ದಿಢೀರ್‌ನೇ ಹುದ್ದೆಗೆ ರಾಜಿನಾಮೆ ನೀಡಿ ಐಎಎಸ್, ಕೆಎಎಸ್ ಆಗಬೇಕು ಎಂದುಕೊಂಡು ದೆಹಲಿ ಕಡೆ ಮುಖ ಮಾಡಿದೆ. ಅಲ್ಲಿ ಕೋಚಿಂಗ್ ತರಬೇತಿ ಪಡೆದು ನಿರಂತರ 4 ವರ್ಷಗಳ ಅಧ್ಯಯನ ಮಾಡಿ 2 ಬಾರಿ ಕೆಎಎಸ್ ಮುಖ್ಯ ಪರೀಕ್ಷೆ ಎದುರಿಸಿದೆ. 2-3 ಅಂಕಗಳ ಅಂತರದಲ್ಲಿ ಹುದ್ದೆ ಕೈಜಾರಿತು. ವಿಫಲ ಪ್ರಯತ್ನಗಳನ್ನು ಪಾಠವಾಗಿ ಸ್ವೀಕರಿಸಿ ಮನೋಬಲ ಕುಸಿಯಲು ಬಿಡದಂತೆ ನೋಡಿಕೊಂಡೆ.

8) ಪಿಎಸ್‌ಐ ಮುಖಾಮುಖಿಯಲ್ಲಿ ಯಾವ ರೀತಿಯ ಪ್ರಶ್ನೆಗಳು ಬರುತ್ತವೆ.?

ಸಂದರ್ಶನ ಎಂಬುದು ನಮ್ಮ ವ್ಯಕ್ತಿತ್ವ ಅಳೆಯುವಂಥದ್ದು. ನಮ್ಮನ್ನು ಸಂದರ್ಶನ ಮಾಡುವ ಸಲುವಾಗಿ ಒಂದು ಬೋರ್ಡ್ ಇರುತ್ತದೆ. ಅದರಲ್ಲಿ ಹಲವು ಸದಸ್ಯರಿರುತ್ತಾರೆ. ಅವರು ಎಲ್ಲ ರೀತಿಯ ಪ್ರಶ್ನೆಗಳನ್ನು ಕೇಳುತ್ತಾರೆ. ನಾನು ಮೊದಲನೇ ಬಾರಿ ಸಂದರ್ಶನಕ್ಕೆ ಹೋಗಿದ್ದೆ. ಆಗ ಸ್ವಲ್ಪ ಭಯ ಗೊಂದಲಗಳು ಕಾಡುತ್ತಿದ್ದವು. ಸಂದರ್ಶನದಲ್ಲಿ ಒಳ್ಳೆಯ ಪ್ರಶ್ನೆಗಳು ಕೇಳಿದ್ದರಿಂದ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಿದ್ದೆ. ಆಗ ಸಂದರ್ಶನ ಪಾಸಾದೆ.

9) ಪೊಲೀಸ್ ಕಾನ್‌ಸ್ಟೇಬಲ್ ಅಥವಾ ಇನ್ಸ್‌ಪೆಕ್ಟರ್ ಹುದ್ದೆಗೆ ದೈಹಿಕ ಸದೃಢತೆ ಎಷ್ಟು ಮುಖ್ಯ ?

ಪೊಲೀಸ್ ಹುದ್ದೆಗೆ ಪುಸ್ತಕದ ಜ್ಞಾನವಿದ್ದರೆ ಸಾಲದು. ಅದರ ಜತೆಗೆ ದೈಹಿಕ ಸಾಮರ್ಥ್ಯವೂ ಮುಖ್ಯ. ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗಿದ್ದರೆ ಮಾತ್ರ ಪೊಲೀಸ್‌ ಇಲಾಖೆಯಲ್ಲಿ ಸೇವೆ ಸಲ್ಲಿಸಲು ಸಾಧ್ಯ. ಹೀಗಾಗಿ ಅಭ್ಯರ್ಥಿಗಳು ದೈಹಿಕ ಸಹಿಷ್ಣುತೆ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕಾಗುತ್ತದೆ. ದಿನನಿತ್ಯವೂ ಬೆಳಗಿನ ಜಾವ ವ್ಯಾಯಾಮ, ರನ್ನಿಂಗ್, ಆರೋಗ್ಯಕರ ಆಹಾರ ಸೇವನೆ ಮಾಡುವುದು ಮಹತ್ವವಾಗಿದೆ.

10) ಪಿಎಸ್‌ಐ ಕನಸು ಕಟ್ಟಿಕೊಂಡಿರುವ ಸ್ಪರ್ಧಾರ್ಥಿಗಳಿಗೆ ನಿಮ್ಮ ಸಲಹೆಗಳೇನು?

ನಿರಂತರ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವುದು ಎಂದರೆ ಒಂದು ಹುದ್ದೆಗೆ ಬೇಕಾದ ಜ್ಞಾನ, ಕೌಶಲ ಹಾಗೂ ವೃತ್ತಿಪರತೆ ಆಳವಡಿಸಿಕೊಳ್ಳುವವುದು ಮುಖ್ಯ ಜತೆಗೆ ನನಗೊಂದು ಭವಿಷ್ಯವೂ ಇದೆ ಅಂತ ಖಾತ್ರಿಪಡಿಸಿಕೊಳ್ಳುವುದು. ಪಿಎಸ್‌ಐ ಆಕಾಂಕ್ಷಿಗಳು ಶಿಸ್ತು ಆಳವಡಿಸಿಕೊಳ್ಳುವುದು ಮತ್ತು ನಿರಂತರ ಅಭ್ಯಾಸ  ಮಾಡುವುದು ಮುಖ್ಯ. ಎದುರಾಗುವ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸಬೇಕು. ಪ್ರಯತ್ನ ಮಾಡುವಾಗ ವಿಫಲವಾದರೂ ಎದೆಗುಂದದೆ ಮುನ್ನುಗ್ಗಿದರೆ ಖಂಡಿತವಾಗಿ ಯಶಸ್ಸು ನಮ್ಮದಾಗುತ್ತದೆ. ಅಭ್ಯಾಸ

11) ಪೊಲೀಸ್ ಸಬ್‌ ಇನ್ಸ್ ಪೆಕ್ಟರ್ ಕೆಲಸದ ಒತ್ತಡ ಹೇಗಿರುತ್ತದೆ? ಅದನ್ನು ನಿಭಾಯಿಸುವುದು ಹೇಗೆ?

ಪಿಎಸ್‌ಐ ಪೊಲೀಸ್ ಠಾಣೆಯ ಉಸ್ತುವಾರಿಯಗಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಹೊಣೆ ಹೊತ್ತಿರುತ್ತಾರೆ. ಠಾಣೆಯ ಆಡಳಿತ, ಸಿಬ್ಬಂದಿ ಮೇಲ್ವಿಚಾರಣೆ, ಹಗಲು ಮತ್ತು ರಾತ್ರಿ ಗಸ್ತು ಕರ್ತವ್ಯ, ಗಣ್ಯ ವ್ಯಕ್ತಿಗಳಿಗೆ ಭದ್ರತೆ, ಅಪರಾಧ ಪ್ರಕರಣಗಳ ಪತ್ತೆ, ಮುನ್ನೆಚ್ಚರಿಕಾ ಕ್ರಮಗಳು, ಹಬ್ಬ, ಜಾತ್ರೆ, ಇತರೆ ಯಾವುದೇ ಕಾರ್ಯಕ್ರಮಗಳಿರಲಿ, ಅಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಂದೋಬಸ್ತ್ ಕರ್ತವ್ಯ ಮಾಡುವುದು ಮುಖ್ಯ. ಯಾವುದೇ ಅನಿಶ್ಚಿತತೆಗಳು, ಆಕಸ್ಮಿಕ ಘಟನೆಗಳು ಘಟಿಸಿದಾಗ ಅವುಗಳನ್ನು ನಿರ್ವಹಿಸಲು ಸದಾ ಸಿದ್ಧರಿರಬೇಕಾಗುತ್ತದೆ. ಹೀಗಾಗಿ ಕೆಲಸದ ಒತ್ತಡ ಇರುವುದು ಸಹಜ.

ವಿಶೇಷ ಸಂದರ್ಶನ : ಆಂಟೋನಿ ಪತ್ರಕರ್ತ

Join WhatsApp Channel

Join Now

Telegram Join

Join Now

Instagram Join

Join Now