
ಕ್ರಮೇಣ ಸಮಾಜದ ಅಂಚಿನಲ್ಲಿ ಉಳಿದ ಸಮುದಾಯಗಳ ಜೀವನವನ್ನು ಹೊಸ ದಾರಿಯತ್ತ ಕೊಂಡೊಯ್ದ ಕ್ರಾಂತಿಕಾರಿ ನಾಯಕ ಬಿ. ಬಸವಲಿಂಗಪ್ಪರ 33ನೇ ಮಹಾಪರಿನಿಬ್ಬಾಣ ಸಂಸ್ಮರಣೆ ಕಾರ್ಯಕ್ರಮವನ್ನು ಬೆಂಗಳೂರು ವಿಶ್ವವಿದ್ಯಾಲಯದ ಬಿ. ಬಸವಲಿಂಗಪ್ಪ ಅಭಿವೃದ್ಧಿ ಅಧ್ಯಯನ ಸಂಸ್ಥೆ ಆಯೋಜಿಸಿತು.
ಕಾರ್ಯಕ್ರಮದಲ್ಲಿ ಮಾತಾಡಿದ ಸಂಸ್ಥೆಯ ಸಂಯೋಜಕರಾದ ಪ್ರೊ. ಬಿ.ಎಲ್. ಮೂರಳಿಧರ ಅವರು, “ಬಸವಲಿಂಗಪ್ಪರು ಕರ್ನಾಟಕದ ಅಂಬೇಡ್ಕರ್ ಎಂದೇ ಪ್ರಸಿದ್ಧರಾಗಿದ್ದಾರೆ.
ಅವರು ಬಾಬಾಸಾಹೇಬ ಡಾ. ಬಿ.ಆರ್. ಅಂಬೇಡ್ಕರ್ ಅವರ ದಾರಿ ಅನುಸರಿಸಿ ಶೋಷಿತ, ದಮನಿತ ಮತ್ತು ದಲಿತ ಸಮುದಾಯಗಳ ಧ್ವನಿಯಾಗಿದ್ದರು. ಸಮಾಜದ ಅಸಮಾನತೆಯನ್ನು ಎದುರಿಸಲು ಬೂಸಾ ಚಳುವಳಿ ಸೇರಿದಂತೆ ಅನೇಕ ಸಾಮಾಜಿಕ ಪರಿವರ್ತನೆ ಚಟುವಟಿಕೆಗಳನ್ನು ಕೈಗೊಂಡಿದ್ದರು,” ಎಂದು ಹೇಳಿದರು.
ಅವರು ಮುಂದುವರಿಸಿ, “ಮಲಹೊರುವ ಜಾತಿ ಅನಿಷ್ಠ ಪದ್ಧತಿಯನ್ನು ನಿಷೇಧಿಸಿ ಅವರಿಗೆ ‘ಪೌರ ಕಾರ್ಮಿಕ’ ಎಂಬ ಮಾನ್ಯತೆ ನೀಡಿದ ಕ್ರಮದಿಂದ ಸಮಾಜದ ಹೇರಿಕೆಯ ರಚನೆಗೆ ಕನ್ನಡಿ ಹಿಡಿದರು. ಶಾಲಾ ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟ ಯೋಜನೆ, ಆರ್ಥಿಕ ಸಹಾಯದಡಿ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ಅವಕಾಶ ನೀಡಿದದ್ದು ಅವರ ಮುಂದಾಳತ್ವದ ದೃಷ್ಟಿಯ ಪ್ರತೀಕ,” ಎಂದರು.ಅವರು ಮತ್ತಷ್ಟು ಹೇಳಿದರು, “ಬಸವಲಿಂಗಪ್ಪರ ಜೀವನ ಮತ್ತು ಕೃತಿಗಳ ಕುರಿತು ಶೈಕ್ಷಣಿಕ ಸಂಶೋಧನೆ ಅಗತ್ಯವಾಗಿದೆ.
ಅವರ ಸಾಮಾಜಿಕ ಚಿಂತನೆ, ಆಡಳಿತ ದೃಷ್ಟಿ ಮತ್ತು ಪರಿವರ್ತನಾ ಧೋರಣೆಯು ಹೊಸ ಪೀಳಿಗೆಗೆ ಪಾಠವಾಗಬೇಕು,” ಎಂದರು.ನಿವೃತ್ತ ಸಂಯೋಜಕರಾದ ಪ್ರೊ. ಟಿ.ಹೆಚ್. ಮೂರ್ತಿ ತಮ್ಮ ಅಭಿಪ್ರಾಯ ನೀಡುತ್ತಾ, “ಬಸವಲಿಂಗಪ್ಪರು ಅಂಬೇಡ್ಕರ್ ಚಿಂತನೆಗಳನ್ನು ಆಡಳಿತದ ಅಂಗಳದಲ್ಲಿ ಅನುಷ್ಠಾನಗೊಳಿಸಿದ ಅಪರೂಪದ ನಾಯಕರು. ಅವರ ಆಶಯಗಳು ಇಂದಿನ ಸಮಾಜದಲ್ಲಿಯೂ ಪ್ರಸ್ತುತವಾಗಿವೆ. ಬೆಂಗಳೂರು ವಿಶ್ವವಿದ್ಯಾಲಯದ ಅಧ್ಯಯನ ಕೇಂದ್ರಗಳು ಕೇವಲ ಸ್ಮಾರಕಗಳ ಮಟ್ಟದಲ್ಲಿ ಸೀಮಿತವಾಗದೆ ಸಂಶೋಧನೆ ಮತ್ತು ಪ್ರಾಯೋಗಿಕ ಅಧ್ಯಯನಕ್ಕೆ ನಿಲ್ದಾಣವಾಗಬೇಕು,” ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಅಧ್ಯಕ್ಷತೆ ವಹಿಸಿದ್ದ ಕುಲಪತಿ ಡಾ. ಜಯಕರ ಎಸ್.ಎಂ ಅವರು, “ಬಸವಲಿಂಗಪ್ಪರ ಆದರ್ಶ ಮತ್ತು ಸಾಧನೆಗಳು ಸಾಮಾಜಿಕ ಸಮಾನತೆ ಮತ್ತು ನ್ಯಾಯಪ್ರಜ್ಞೆಯ ಹೊಸ ದಿಕ್ಕನ್ನು ತೋರಿವೆ. ಅಧ್ಯಯನ ಕೇಂದ್ರದ ಪುನರುಜ್ಜೀವನ, ಗ್ರಂಥಾಲಯ ನಿರ್ಮಾಣ ಹಾಗೂ ಸಂಶೋಧನಾ ಚಟುವಟಿಕೆಗಳ ವ್ಯಾಪ್ತಿಯನ್ನು ವಿಸ್ತರಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ,” ಎಂದರು.
ಈ ಸಂದರ್ಭದಲ್ಲಿ ಕುಲಸಚಿವೆ ಕೆ.ಟಿ. ಶಾಂತಲಾ, ಅಂಬೇಡ್ಕರ್‌ವಾದಿ ಚಿಂತಕ ಬಿ. ಗೋಪಾಲ್, ಸಿಂಡಿಕೇಟ್ ಸದಸ್ಯ ಬಿ.ಡಿ. ಗಂಗರಾಜ್, ಕ್ಷೇಮಾಭಿವೃದ್ಧಿ ನಿರ್ದೇಶಕ ಪಿ.ಸಿ. ನಾಗೇಶ್, ಎಸ್‌ಸಿ/ಎಸ್‌ಟಿ ಸೆಲ್‌ನ ವಿಶೇಷಾಧಿಕಾರಿ ಪ್ರೊ. ಜಿ. ಕೃಷ್ಣಮೂರ್ತಿ ಹಾಗೂ ವಿದ್ಯಾರ್ಥಿ ನಾಯಕರು, ಸಂಶೋಧಕರು, ಅಕಾಡೆಮಿಕ್ ಸಿಬ್ಬಂದಿಗಳು ಮತ್ತು ಅಭಿಮಾನಿಗಳು ಹಾಜರಿದ್ದರು.
ಬಿ. ಬಸವಲಿಂಗಪ್ಪರ 33ನೇ ಮಹಾಪರಿನಿಬ್ಬಾಣ ಸಂಸ್ಮರಣೆ ಸಂದರ್ಭದಲ್ಲಿ ಕುಲಪತಿ ಪ್ರೊ. ಜಯಕರ ಎಸ್.ಎಂ, ಕುಲಸಚಿವೆ ಕೆ.ಟಿ. ಶಾಂತಲಾ, ಸಂಯೋಜಕ ಪ್ರೊ. ಬಿ.ಎಲ್. ಮೂರಳಿಧರ, ಅಂಬೇಡ್ಕರ್‌ವಾದಿ ಬಿ. ಗೋಪಾಲ್, ಸಿಂಡಿಕೇಟ್ ಸದಸ್ಯ ಬಿ.ಡಿ. ಗಂಗರಾಜ್, ಕ್ಷೇಮಾಭಿವೃದ್ಧಿ ನಿರ್ದೇಶಕ ಪಿ.ಸಿ. ನಾಗೇಶ್ ಹಾಗೂ ಪ್ರೊ. ಜಿ. ಕೃಷ್ಣಮೂರ್ತಿ ಉಪಸ್ಥಿತರಿದ್ದರು.
(ವರದಿ: ಆಂಟೊನಿ)





