
ಬೆಂಗಳೂರು ಗ್ರಾಮಾಂತರ: ಆನೇಕಲ್ ತಾಲೂಕಿನ ಸುರಗಜಕ್ಕನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೇಡಹಳ್ಳಿ ಸಮೀಪದಲ್ಲಿ ಬಾಂಗ್ಲಾದೇಶಿ ಕುಟುಂಬಗಳು ಅಕ್ರಮವಾಗಿ ನೆಲೆಸಿವೆ ಎಂದು ಬಿಜೆಪಿ ಕಾರ್ಯಕರ್ತರು ದೂರು ನೀಡಿದ್ದ ಮೇರೆಗೆ, ಸೋಮವಾರ ಕಂದಾಯ, ತಾಲ್ಲೂಕು ಮತ್ತು ಪಂಚಾಯಿತಿ ಅಧಿಕಾರಿಗಳು ಗುಡಿಸಲುಗಳನ್ನು ತೆರವುಗೊಳಿಸಿದರು. ಪೊಲೀಸ್ ಸಮ್ಮುಖದಲ್ಲಿ ಯಂತ್ರಗಳ ಬಳಕೆಯಿಂದ ಈ ಕಾರ್ಯ ನಡೆಯಿತು.
50ಕ್ಕೂ ಹೆಚ್ಚು ಕುಟುಂಬಗಳು – ಮಕ್ಕಳು, ಮರಿಗಳೊಂದಿಗೆ – ಶೆಡ್‌ಗಳಲ್ಲಿ ವಾಸಿಸುತ್ತಿದ್ದರು. ಶೆಡ್‌ಗಳ ಮುಂದೆ ಪೇಪರ್, ಪ್ಲಾಸ್ಟಿಕ್, ಕಬ್ಬಿಣ ಕಸದ ರಾಶಿಗಳು ಸುರಕ್ಷತಾ ಭೀತಿಯನ್ನು ಹುಟ್ಟಿಸಿದ್ದವು.
ಪಶ್ಚಿಮ ಬಂಗಾಳದ ಆಧಾರ್ ಕಾರ್ಡ್‌ಗಳು ಇದ್ದರೂ, ಮೂಲಸ್ಥಳದ ನಿಖರ ಮಾಹಿತಿ ನೀಡಲಿಲ್ಲ. ಇದರಿಂದ ಅನುಮಾನ ಹೆಚ್ಚಾಯಿತು.ತೆರವು ಸಮಯದಲ್ಲಿ ವಿಚಲಿತರಾದ ನಿವಾಸಿಗಳು ಗುರುತು ಚೀಟಿ, ದಾಖಲೆಗಳನ್ನು ತೋರಿಸುವಂತೆ ಒಂದು ದಿನದ ಅವಕಾಶ ಕೇಳಿದರು. ಅಧಿಕಾರಿಗಳು ಒಪ್ಪಿ ಕಾರ್ಯಾಚರಣೆ ಸ್ಥಗಿತಗೊಳಿಸಿದರು.
ಆ ಮಧ್ಯೆಯೇ ಅವರು ಪ್ಲಾಸ್ಟಿಕ್-ಬಟ್ಟೆಗಳಿಂದ ತಾತ್ಕಾಲಿಕ ಗೂಡುಗಳನ್ನು ನಿರ್ಮಿಸಿದ್ದಾರೆ.ಬಿಜೆಪಿ ಮುಖಂಡ ಎ. ನಾರಾಯಣಸ್ವಾಮಿ ಅವರು ಸ್ಥಳದಲ್ಲೇ “ಭಾರತೀಯರಿದ್ದರೆ ತೊಂದರೆ ಇಲ್ಲ, ಬಾಂಗ್ಲಾದೇಶಿಯರಾದರೆ ಕಾನೂನು ಕ್ರಮ ಅನಿವಾರ್ಯ.
ಅಕ್ರಮ ನಿವಾಸಿಗಳ ಮೇಲೆ ನಿಗಾ ಬೇಕು” ಎಂದು ಒತ್ತಾಯಿಸಿದರು. ಕಳೆದ 15 ದಿನಗಳಿಂದ ನಿಗಾ ಇದ್ದು, ಒಬ್ಬರನ್ನು ಪೊಲೀಸ್ ವಿಚಾರಣೆಗೆ ಕರೆದಿದ್ದಾರೆ ಎಂದು ಮುಖಂಡ ಭರತ್ ತಿಳಿಸಿದರು. ಮೇಡಹಳ್ಳಿ, ಹೀಲಲಿಗೆ, ಮರಸೂರು ಸೇರಿ ಹಲವೆಡೆ ಇದೇ ರೀತಿಯ ದೂರುಗಳಿವೆ.
ಬಿಜೆಪಿ ಕಾರ್ಯಕರ್ತರು ಅಗ್ರಹಾರ ಸತೀಶ್, ಗೋಪಾಲಪ್ಪ, ದಿನ್ನೂರು ರಾಜು, ನರಸಿಂಹರೆಡ್ಡಿ, ರಘುನಾಥರೆಡ್ಡಿ, ರಘು, ರಾಜೇಂದ್ರ ಸೇರಿದಂತೆ ಸ್ಥಳದಲ್ಲಿದ್ದರು. ಸಮಗ್ರ ದಾಖಲೆ ಪರಿಶೀಲನೆಗೆ ಒತ್ತು ನೀಡಲಾಗಿದೆ.





