
ಭದ್ರಾವತಿ: ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಚಾಮೇಗೌಡ ಏರಿಯಾದಲ್ಲಿ ಅಭಿಮಾನಿಗಳ ಸ್ವಂತ ಶ್ರಮ ಮತ್ತು ಹಣದಿಂದ ನಿರ್ಮಿತ ಡಾ. ರಾಜ್‌ಕುಮಾರ್–ಪುನೀತ್ ರಾಜ್‌ಕುಮಾರ್ ದೇವಾಲಯವನ್ನು ಗುರುವಾರ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಉದ್ಘಾಟಿಸಿದರು. ಸುಮಾರು 3 ಅಡಿ ಎತ್ತರದ ಕಂಚಿನ ಪುತ್ಥಳಿಗಳೊಂದಿಗೆ ಈ ದೇವಾಲಯವು ಅಭಿಮಾನಿಗಳ ಭಕ್ತಿಯ ಸಂಕೇತವಾಗಿದೆ.
ಡಾ. ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಸದಸ್ಯರು ಸಂಗ್ರಹಿಸಿದ 15 ಲಕ್ಷ ರೂಪಾಯಿಗಳಲ್ಲಿ ಈ ದೇವಾಲಯ ಮತ್ತು ಪುತ್ಥಳಿಗಳನ್ನು ನಿರ್ಮಿಸಿದ್ದಾರೆ. ತಂದೆ-ಮಗ ಇಬ್ಬರ ಅಭಿನಯ ಶ್ರೀಮಂತಿಕೆ, ಸಾಮಾಜಿಕ ಸೇವೆ ಮತ್ತು ಕನ್ನಡ ಚಿತ್ರರಂಗಕ್ಕೆ ನೀಡಿದ ಕೊಡುಗೆಯನ್ನು ಗೌರವಿಸುವ ಉದ್ದೇಶದಿಂದ ಈ ಕೆಲಸ ಮಾಡಲಾಗಿದೆ. ಇಬ್ಬರೂ ಒಟ್ಟಿಗೆ ನಟಿಸಿದ ಚಿತ್ರಗಳು ಕನ್ನಡ ಇಂಡಸ್ಟ್ರಿಯನ್ನು ಉತ್ತುಂಗಕ್ಕೆ ಏರಿಸಿದ್ದವು.
ಉದ್ಘಾಟನೆ ಸಂದರ್ಭದಲ್ಲಿ ಭಾವುಕರಾದ ಅಶ್ವಿನಿ ಪುನೀತ್ ರಾಜ್‌ಕುಮಾರ್, “ಅಭಿಮಾನಿಗಳ ಪ್ರೀತಿ ಮತ್ತು ನಂಬಿಕೆಗೆ ನಾನು ಎಂದಿಗೂ ಕೃತಜ್ಞ. ಇದು ನಮ್ಮ ಕುಟುಂಬಕ್ಕೆ ಅಪಾರ ಗೌರವ” ಎಂದು ಹೇಳಿದರು.
ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್ ಮಾತುಗಳಲ್ಲಿ, “ರಾಜ್‌ಕುಮಾರ್ ಅವರು ವಯಸ್ಸನ್ನು ಮೀರಿದ ಅಭಿನಯಸಾಮ್ರಾಟ್. ಪುನೀತ್ ಅವರ ಶಕ್ತಿ ಮತ್ತು ಸೇವೆಯೂ ಅಮರ. ಇಲ್ಲಿ ದೈನಂದಿನ ಪೂಜೆ ನಡೆಯಲಿದ್ದು, ಸೂರ್ಯ-ಚಂದ್ರರು ಇರುವವರೆಗೂ ಇದು ನಿಲ್ಲುವುದಿಲ್ಲ. ಅಶ್ವಿನಿ ಅಮ್ಮನ ಆಗಮನ ನಮ್ಮ ಭಾಗ್ಯ” ಎಂದರು.
ಸ್ಥಳೀಯ ನಾಯಕರು, ಅಭಿಮಾನಿಗಳು ಭಾಗವಹಿಸಿದ ಕಾರ್ಯಕ್ರಮವು ಭದ್ರಾವತಿಯಲ್ಲಿ ರಾಜ್‌ಕುಮಾರ್ ಕುಟುಂಬದ ಸ್ಮರಣೆಯನ್ನು ಶಾಶ್ವತಗೊಳಿಸಿದೆ.
ವರದಿ :- ಆಂಟೋನಿ ಪತ್ರಕರ್ತ





