
ರಾಸಾಯನಿಕ ಸೋರಿಕೆ ವಿಪತ್ತು ನಿರ್ವಹಣೆ ದಿನ-2025
ರಾಸಾಯನಿಕ ಸೋರಿಕೆ ವಿಪತ್ತು ತಡೆಗೆ ಮುಂಜಾಗ್ರತೆ ಅಗತ್ಯ: ಅಪರ ಜಿಲ್ಲಾಧಿಕಾರಿ ಸೈಯದ್ ಆಯಿಶಾ
ಬೆಂ.ಗ್ರಾ.ಜಿಲ್ಲೆ, ಡಿಸೆಂಬರ್. 22(ಕ.ವಾ):-ಕಾರ್ಖಾನೆಗಳಲ್ಲಿ ಸಂಭವಿಸಬಹುದಾದ ರಾಸಾಯನಿಕ ಸೋರಿಕೆ ವಿಪತ್ತನ್ನು ಮುಂಜಾಗ್ರತೆ ಹಾಗೂ ಸುರಕ್ಷತಾ ಕ್ರಮಗಳ ಮೂಲಕ ತಡೆಯಲು ಸಾಧ್ಯ ಎಂದು ಅಪರ ಜಿಲ್ಲಾಧಿಕಾರಿ ಸೈಯದ್ ಆಯಿಶಾ ಅವರು ಹೇಳಿದರು.
ದೊಡ್ಡಬಳ್ಳಾಪುರ ತಾಲ್ಲೂಕಿನ ಓಬೆದೆನಹಳ್ಳಿ ಕೈಗಾರಿಕಾ ಪ್ರದೇಶದ ಅಜೆಕ್ಸ್ ಕಂಪನಿ ಸಭಾಂಗಣದಲ್ಲಿ ಬೆಂಗಳೂರು ಗ್ರಾಮಾಂತರ ಕೈಗಾರಿಕಾ ಇಲಾಖೆ ಹಾಗೂ ಅಜೆಕ್ಸ್ ಕಂಪನಿ ಸಹಯೋಗದಲ್ಲಿ “ರಾಸಾಯನಿಕ ಸೋರಿಕೆ ನಿರ್ವಹಣೆ ದಿನ-2025” ಅಂಗವಾಗಿ ಆಯೋಜಿಸಿದ್ದ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೈಗಾರಿಕೆಗಳು, ಕಾರ್ಖಾನೆಗಳಲ್ಲಿ ಸಂಭವಿಸಬಹುದಾದ ವಿಪತ್ತುಗಳು ಎದುರಿಸಲು ಅಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಅರಿವು ಮೂಡಿಸುವ ಜೊತೆಗೆ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು. ಜೊತೆಗೆ ಕೈಗಾರಿಕಾ ಪ್ರದೇಶದ ಸುತ್ತಮುತ್ತಲಿನ ಸಾರ್ವಜನಿಕರಿಗೆ ವಿಪತ್ತುಗಳ ಬಗ್ಗೆ ಕಾಲಕಾಲಕ್ಕೆ ಜಾಗೃತಿ ಮೂಡಿಸಬೇಕು.
ಕೈಗಾರಿಕೆಗಳು ವಿಪತ್ತು ನಿರ್ವಹಣೆಗಾಗಿ ಆಗಿಂದಾಗ್ಗೆ ಅಣುಕು ಪ್ರದರ್ಶನ, ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಇದರಿಂದ ರಾಸಾಯನಿಕ ಸೋರಿಕೆ ಸೇರಿದಂತೆ ಇನ್ನಿತರ ವಿಪತ್ತುಗಳು ಸಂಬಂವಿಸಿದಾಗ ಕಾರ್ಮಿಕರು, ಸಾರ್ವಜನಿಕರು ಹೇಗೆ ಸನ್ನದ್ಧರಾಗಬೇಕು, ಮುಂಜಾಗ್ರತೆ ಕ್ರಮ ಹೇಗೆ ಕೈಗೊಳ್ಳಬೇಕು ಎಂಬ ಅರಿವು ಬರುತ್ತದೆ ಎಂದರು.
ಯಾವುದೇ ಒಂದು ವಿಪತ್ತು ಸಂಭವಿಸಿದಾಗ ಇಲಾಖೆಗಳ ಸಹಕಾರ, ಸಮಯ, ಅಧಿಕಾರಿಗಳ ಸ್ಪಂದನೆ ಪ್ರಮುಖ ಪಾತ್ರ ವಹಿಸುತ್ತದೆ. ಹಾಗಾಗಿ ಕಂದಾಯ, ಪೊಲೀಸ್, ಅಗ್ನಿ ಶಾಮಕ ದಳ ಹಾಗೂ ಸಂಬಂಧಿಸಿದ ಇಲಾಖೆಗಳು ಮತ್ತು ಕೈಗಾರಿಕೆಗಳ ಸುರಕ್ಷಿತ ಕ್ರಮಗಳು ವಿಪತ್ತುಗಳನ್ನು ಎದುರಿಸಲು ಸದಾ ಸನ್ನದ್ಧವಾಗಿರಬೇಕು. ಸಾರ್ವಜನಿಕರು ಕೂಡ ವಿಪತ್ತುಗಳು ಸಂಭವಿಸಿದಾಗ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಅರಿವು ಹೊಂದಿರಬೇಕು ಎಂದರು.
ಕಾರ್ಯಗಾರದಲ್ಲಿ ಕೈಗಾರಿಕೆಗಳ ಹೆಚ್ಚುವರಿ ನಿರ್ದೇಶಕರಾದ ನಂಜಪ್ಪ ಕೆ.ಜಿ ಅವರು ಮಾತನಾಡಿ, ಕಾರ್ಖಾನೆಗಳು ಅಗತ್ಯ ಮುಂಜಾಗ್ರತೆ ಇರದೇ ಅಧಿಕ ಪ್ರಮಾಣದ ರಾಸಾಯನಿಕ ಸಂಗ್ರಹ ಮಾಡಬಾರದು. ಕಂಪನಿಗಳು ತಮ್ಮ ಆದಾಯದಲ್ಲಿ ಬಹುಪಾಲು ಸುರಕ್ಷತೆಗೆ ಒತ್ತು ನೀಡಬೇಕು ಎಂದರು.
ಇಪಿಎಫ್ಒ ಯಲಹಂಕ ಪ್ರಾದೇಶಿಕ ಆಯುಕ್ತರಾದ ಶ್ರೀಮತಿ ಸ್ವಾಗತ ರೈ ಅವರು ಮಾತನಾಡಿ, ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ತಮ್ಮ ಆರೋಗ್ಯ ಹಾಗೂ ಭವಿಷ್ಯ ನಿಧಿ ದೃಷ್ಟಿಯಿಂದ ತಪ್ಪದೇ ಇಪಿಎಫ್ಒ ಖಾತೆ ತೆರೆದು ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಕೈಗಾರಿಕೆಗಳ ಉಪನಿರ್ದೇಶಕರಾದ ಎಂ.ಎ ಸೋಮಶೇಖರ್, ಕೈಗಾರಿಕೆಗಳ ಜಂಟಿ ನಿರ್ದೇಶಕರಾದ ನವನೀತ ಮೋಹನ್, ಕೈಗಾರಿಕೆಗಳ ಹಿರಿಯ ಸಹಾಯಕ ನಿರ್ದೇಶಕರಾದ ರವಿ ಬಾಬು ಡಿ, ಅಜೆಕ್ಸ್ ಕಂಪನಿ ವ್ಯವಸ್ಥಾಪಕರಾದ ಮುರುಗನ ಜೆ., ಎಂ.ಆರ್.ಪಿ.ಎಲ್ ಮಾರ್ಕೆಟಿಂಗ್ ಮುಖ್ಯ ವ್ಯವಸ್ಥಾಪಕರಾದ ಧರ್ಮೆಂದ್ರ ಕುಮಾರ್, ಅಗ್ನಿಶಾಮಕ ಬೆಂಗಳೂರು ಗ್ರಾಮಾಂತರ ಪ್ರಾದೇಶಿಕ ಅಧಿಕಾರಿ ಸಂತೋಷ, ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರ ಉಸ್ತುವಾರಿ ಘಟಕದ ಸಲಹೆಗಾರರಾದ ಸ್ಮಿತಾ ಸೇರಿದಂತೆ ಜಿಲ್ಲೆಯ ವಿವಿಧ ಕೈಗಾರಿಕೆಗಳ ಮುಖ್ಯಸ್ಥರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.





