
ಉಡುಪಿ: ಕರಾವಳಿಯ 116 ಐಲ್ಯಾಂಡ್‌ಗಳನ್ನು ಪ್ರವಾಸೋದ್ಯಮ ಹಬ್‌ಗಳಾಗಿ ಬದಲಾಯಿಸುವ ಮೂಲಕ ರಾಜ್ಯದ ಆರ್ಥಿಕತೆಗೆ ಹೊಸ ಉತ್ಪಾದಕತೆ ನೀಡುತ್ತೇವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಘೋಷಿಸಿದ್ದಾರೆ. ಇದು ಕರಾವಳಿಗೆ ಮಾತ್ರವಲ್ಲ, ದೇಶದ ಭವಿಷ್ಯಕ್ಕೆ ಬಾಗಿಲು ತೆರೆಯುತ್ತದೆ.
ಸೋಮವಾರ ಸೇಂಟ್ ಮೇರೀಸ್ ಐಲ್ಯಾಂಡ್‌ನಲ್ಲಿ 77ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. “ನಿರ್ಲಕ್ಷ್ಯಕ್ಕೆ ಒಳಗಾಗಿರುವ ಈ ಐಲ್ಯಾಂಡ್‌ಗಳು ಸಮುದ್ರ ತೀರದ ಸುಂದರ ಪ್ಯಾರಡೈಸ್‌ಗಳು. ಸರ್ಫಿಂಗ್, ಸ್ನಾರ್ಕಲಿಂಗ್, ಇಕೋ-ರಿಸಾರ್ಟ್‌ಗಳ ಮೂಲಕ ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸಬಹುದು” ಎಂದು ಹೇಳಿದರು.
ಕೆಲವು ದಿನಗಳ ಹಿಂದೆ ಮಂಗಳೂರಿನಲ್ಲಿ ನಡೆದ ‘ಇಡೀ ದಿನ’ ವಿಚಾರಸಂಕಿರಣದಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮತ್ತು ಕರಾವಳಿ ಜಿಲ್ಲಾ ಪ್ರತಿನಿಧಿಗಳು ಭಾಗವಹಿಸಿ ಯೋಜನೆಗಳನ್ನು ಚರ್ಚಿಸಿದ್ದರು. “ರಾಜ್ಯ ಸರ್ಕಾರದ ಈ ಹೊಸ ದೃಷ್ಟಿಕೋನಕ್ಕೆ ನೀವುಗಳೆಲ್ಲ ಸಹಕರಿಸಿ, ಕರಾವಳಿಯನ್ನು ಟೂರಿಸ್ಟ್ ಹಾಟ್‌ಸ್ಪಾಟ್‌ಗೆ ಮಾರ್ಪಡಿಸೋಣ” ಎಂದು ಸಚಿವೆ ಕರೆ ನೀಡಿದರು.
ಈ ಯೋಜನೆಯಿಂದ ಸ್ಥಳೀಯರಿಗೆ ಉದ್ಯೋಗ ಅವಕಾಶಗಳು, ಮಹಿಳಾ ಸಬಲೀಕರಣ ಮತ್ತು ಪರಿಸರ ಸಂರಕ್ಷಣೆ ಸಾಧ್ಯ ಎಂದು ಅವರು ಒತ್ತಿ ಹೇಳಿದರು. ಗಣರಾಜ್ಯೋತ್ಸವದ ಈ ಸಂದರ್ಭ ಕರಾವಳಿ ಅಭಿವೃದ್ಧಿಗೆ ಮೈಲುಗಲ್ಲಾಗಲಿದೆ.
ವರದಿ :- ಆಂಟೋನಿ ಪತ್ರಕರ್ತ





