
ಟರ್ಕಿಯಲ್ಲಿ ಭೀಕರ ವಿಮಾನ ದುರಂತ: ಲಿಬಿಯಾದ ಸೇನಾ ಮುಖ್ಯಸ್ಥ ಸೇರಿ ಏಳು ಮಂದಿ ಬಲಿ
ಟರ್ಕಿಯ ಅಂಕಾರಾ ಸಮೀಪ ಸಂಭವಿಸಿದ ವಿಮಾನ ದುರಂತದಲ್ಲಿ ಲಿಬಿಯಾದ ಸೇನಾ ಮುಖ್ಯಸ್ಥ ಜನರಲ್ ಮುಹಮ್ಮದ್ ಅಲಿ ಅಹ್ಮದ್ ಅಲ್-ಹದ್ದಾದ್ ಸೇರಿದಂತೆ ಏಳು ಮಂದಿ ಮೃತಪಟ್ಟಿದ್ದಾರೆ.
ಲಿಬಿಯಾ ನಿಯೋಗವನ್ನು ಹೊತ್ತೊಯ್ಯುತ್ತಿದ್ದ ಸಣ್ಣ ಖಾಸಗಿ ಜೆಟ್ ಮಂಗಳವಾರ ಸಂಜೆ ಪತನಗೊಂಡಿದೆ ಎಂದು ಟರ್ಕಿಶ್ ಅಧಿಕಾರಿಗಳು ತಿಳಿಸಿದ್ದಾರೆ.ಅಂಕಾರಾದಿಂದ ಹೊರಟ ಕೆಲವೇ ನಿಮಿಷಗಳ ಬಳಿಕ ವಿಮಾನವು ತಾಂತ್ರಿಕ ದೋಷದಿಂದ ಸಂಪರ್ಕ ಕಳೆದುಕೊಂಡಿತ್ತಂತೆ. ಬಳಿಕ, ಹುಡುಕಾಟ ನಡೆಸಿದ ತಂಡಗಳು ವಿಮಾನದ ಅವಶೇಷಗಳನ್ನು ಪತ್ತೆಹಚ್ಚಿದವು.
ಮೃತರಲ್ಲಿ ಸೇನಾ ಮುಖ್ಯಸ್ಥ ಅಲ್-ಹದ್ದಾದ್, ಲಿಬಿಯಾದ ನಾಲ್ವರು ಉನ್ನತಾಧಿಕಾರಿಗಳು ಹಾಗೂ ಮೂವರು ಸಿಬ್ಬಂದಿ ಸದಸ್ಯರು ಸೇರಿದ್ದಾರೆ.ಲಿಬಿಯಾ ಪ್ರಧಾನಿ ಅಬ್ದುಲ್-ಹಮೀದ್ ದ್ಬೈಬಾ ಸಾಮಾಜಿಕ ಮಾಧ್ಯಮದ ಮೂಲಕ ಪ್ರತಿಕ್ರಿಯಿಸಿ, “ಜನರಲ್ ಅಲ್-ಹದ್ದಾದ್ ಅವರ ನಿಧನವು ನಮ್ಮ ರಾಷ್ಟ್ರಕ್ಕೆ ಅಳಿಸಲಾರದ ನಷ್ಟ,” ಎಂದು ತಿಳಿಸಿದ್ದಾರೆ.
ಅವರು ಈ ಘಟನೆಯನ್ನು “ದುರ್ಘಟನೆ” ಎಂದು ವರ್ಣಿಸಿದ್ದಾರೆ.ಲಿಬಿಯಾ ನಿಯೋಗವು ಟರ್ಕಿಯೊಂದಿಗೆ ರಕ್ಷಣಾ ಸಹಕಾರ ಹಾಗೂ ಸೈನಿಕ ಬಲವರ್ಧನೆ ಕುರಿತ ಉನ್ನತ ಮಟ್ಟದ ಮಾತುಕತೆಯಲ್ಲಿ ಭಾಗವಹಿಸಿ ದೇಶಕ್ಕೆ ಹಿಂದಿರುಗುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ ಎಂದು ಮಾಹಿತಿ ಮೂಲಗಳು ತಿಳಿಸಿವೆ.





