
ಪಾಲಕ್ಕಾಡ್ (ಕೇರಳ): ಕೇವಲ ಐದು ವರ್ಷದ ಬಾಲಕಿಯ ಮೇಲಿನ ಕ್ರೂರ ಹಿಂಸೆ ಕೇರಳದ ಕಾಂಜಿಕೋಡ್‌ನಲ್ಲಿ ಬೆಳಕಿಗೆ ಬಂದಿದೆ.
ನಿದ್ದೆಯ ವೇಳೆ ಹಾಸಿಗೆಯಲ್ಲಿ ಮೂತ್ರವಿಸರ್ಜನೆ ಮಾಡಿದ್ದಕ್ಕೆ ಮಲತಾಯಿ ಮಗುವಿನ ಮೇಲೆ ಅಮಾನವೀಯ ಶಾರೀರಿಕ ಹಾನಿ ನಡೆಸಿದ ಘಟನೆ ಸ್ಥಳೀಯರಲ್ಲಿ ಪ್ರತಿಭಟನೆಯ ಅಲೆ ಎಬ್ಬಿಸಿದೆ. ಸಾಮಾಜಿಕ ಕಾರ್ಯಕರ್ತರ ಪ್ರಕಾರ, ಘಟನೆ ಬೆಳಕಿಗೆ ಬರಲು ಕಾರಣ ಅಂಗನವಾಡಿ ಶಿಕ್ಷಕಿಯ ಎಚ್ಚರಿಕೆ.
ಶಾಲೆಗೆ ಬಂದ ಬಾಲಕಿ ವೇದನೆಯಿಂದ ಕುಳಿತುಕೊಳ್ಳಲು ತೊಂದರೆ ಅನುಭವಿಸುತ್ತಿರುವುದನ್ನು ಗಮನಿಸಿದ ಶಿಕ್ಷಕಿ ಪ್ರೀತಿಯಿಂದ ವಿಚಾರಿಸಿದಾಗ, ಮಗು ಮನೆಯಲ್ಲಿನ ಕ್ರೂರ ವರ್ತನೆ ಬಗ್ಗೆ ವಿವರಿಸಿದೆ. ತಕ್ಷಣ ಶಿಕ್ಷಕಿ ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ.
ಪಾಲಕ್ಕಾಡ್ ಪೊಲೀಸ್ ಠಾಣೆ ಪ್ರಕರಣವನ್ನು ಭಾರತೀಯ ನ್ಯಾಯ ಸಂಹಿತೆಯ ಮಕ್ಕಳ ಮೇಲಿನ ದೌರ್ಜನ್ಯ ಸಂಬಂದಿತ ವಿಧಿಗಳಡಿ ದಾಖಲಿಸಿದ್ದು, ಬಿಹಾರ ಮೂಲದ ಆರೋಪಿ ಮಹಿಳೆಯನ್ನು ಬಂಧಿಸಿದೆ.
ನ್ಯಾಯಾಲಯದ ಆದೇಶದ ಮೇರೆಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.ಮಗು ಪ್ರಸ್ತುತ ಮಕ್ಕಳ ಕಲ್ಯಾಣ ಸಮಿತಿಯ (CWC) ಆರೈಕೆಯಲ್ಲಿದ್ದು, ವೈದ್ಯಕೀಯ ಚಿಕಿತ್ಸೆ ಮತ್ತು ಪರಾಮರ್ಶೆ ನೀಡಲಾಗುತ್ತಿದೆ.
ತನಿಖೆ ಮುಂದುವರಿದಿದ್ದು, ಸ್ಥಳೀಯ ಬಾಲಅಧಿಕಾರಿಗಳ ತಂಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದೆ. ಸ್ಥಳೀಯರು ಹಾಗೂ ಸಾಮಾಜಿಕ ಸಂಘಟನೆಗಳು ಘಟನೆಯನ್ನು ಖಂಡಿಸಿರುವುದರ ಜೊತೆಗೆ, ಇಂತಹ ಕೃತ್ಯಗಳಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಆಗ್ರಹಿಸಿದ್ದಾರೆ.
“ಮಗು ಸುರಕ್ಷಿತ ವಾತಾವರಣದಲ್ಲಿ ಬೆಳೆಸುವುದು ಪ್ರತಿ ಕುಟುಂಬದ ಹೊಣೆಗಾರಿಕೆ, ಹಿಂಸೆ ಎಂದಿಗೂ ಪರಿಹಾರವಲ್ಲ,” ಎಂದು ಅಧಿಕಾರಿಗಳು ತಿಳಿಸಿದ್ದಾರೆ.
(ವರದಿ: ಆಂಟೊನಿ)





