
ನ್ಯೂಯಾರ್ಕ್: ಅಮೇರಿಕಾದ ಮೇರಿಲ್ಯಾಂಡ್ ರಾಜ್ಯದ ಹೌವರ್ಡ್ ಕೌಂಟಿಯಲ್ಲಿ ಯುವತಿಯ ಕೊಲೆ ಪ್ರಕರಣ ಬೆಳಕಿಗೆ ಬಂದು, ಭಾರತೀಯ ಮೂಲದ ಯುವಕನ ಮೇಲೆ ಗಂಭೀರ ಆರೋಪ ಹೊರಬಿದ್ದಿದೆ.
ಮಹಿಳೆಯ ಶವ ಪತ್ತೆಯಾದ ಬಳಿಕ ಆರೋಪಿ ಭಾರತಕ್ಕೆ ಪರಾರಿಯಾಗಿರುವುದರಿಂದ ಪ್ರಕರಣ ಇದೀಗ ಅಂತಾರಾಷ್ಟ್ರೀಯ ಮಟ್ಟದ ತನಿಖೆಗೆ ಕಾರಣವಾಗಿದೆ.ಮೃತ ಯುವತಿಯನ್ನು ನಿಕಿತಾ ಗೋಡಿಶಾಲಾ (27) ಎಂದು ಗುರುತಿಸಲಾಗಿದೆ.
ಮೂಲತಃ ಸಿಕಂದರಾಬಾದ್‌ನ ನಿವಾಸಿಯಾಗಿರುವ ನಿಕಿತಾ ಮೇರಿಲ್ಯಾಂಡ್‌ನ ಕೊಲಂಬಿಯಾ ಪ್ರದೇಶದ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದು, ಅಲ್ಲಿ ಯುವಕ ಅರ್ಜುನ್ ಶರ್ಮಾ (26) ಅವರೊಂದಿಗೆ ಸಂಬಂಧ ಹೊಂದಿದ್ದಳು ಎನ್ನುವುದು ತನಿಖಾ ಮೂಲಗಳ ಮಾಹಿತಿ.
ಹೊಸ ವರ್ಷದ ಮುನ್ನದಿನ ನಿಕಿತಾ ನಾಪತ್ತೆಯಾಗಿರುವ ಬಗ್ಗೆ ಅರ್ಜುನ್ ಶರ್ಮಾ ಸ್ವತಃ ಪೊಲೀಸರಿಗೆ ದೂರು ನೀಡಿದ್ದಾನೆ. ಆದರೆ, ತನಿಖೆ ಮುಂದುವರಿದ ವೇಳೆ ಪೊಲೀಸರಿಗೆ ಶಂಕೆ ಹುಟ್ಟಿದ್ದು, ಆತನ ಮನೆ ಶೋಧಿಸಿದಾಗ ನಿಕಿತಾ ಶವ ಪತ್ತೆಯಾಗಿದೆ. ಕತ್ತಿನ ಬಳಿ ಚಾಕುವಿನ ಗಾಯದ ಗುರುತುಗಳು ಕಂಡುಬಂದಿದ್ದು, ಕೊಲೆ ಶಂಕೆ ದೃಢಪಟ್ಟಿದೆ.
ಸ್ಥಳೀಯ ಅಧಿಕಾರಿಗಳು ತಿಳಿಸಿರುವಂತೆ, ಅರ್ಜುನ್ ಶರ್ಮಾ ಕೊಲೆ ಬಳಿಕ ಭಾರತಕ್ಕೆ ಪರಾರಿಯಾಗಿರುವುದು ತನಿಖೆಯಿಂದ ಬಹಿರಂಗವಾಗಿದೆ. ಹೌವರ್ಡ್ ಕೌಂಟಿ ಪೊಲೀಸರು ಈಗ ಇಂಟರ್ಪೋಲ್ ಮತ್ತು ಭಾರತೀಯ ಪೊಲೀಸರ ಸಹಯೋಗದಿಂದ ಆರೋಪಿ ಪತ್ತೆಗೆ ಸಹಕಾರ ಬೇಡಿಕೊಂಡಿದ್ದಾರೆ.
ಈ ಪ್ರಕರಣವು ಅಮೇರಿಕಾದಲ್ಲಿನ ಭಾರತೀಯ ಸಮುದಾಯದೊಳಗೆ ತೀವ್ರ ಚರ್ಚೆಗೆ ಕಾರಣವಾಗಿದ್ದು, ಕುಟುಂಬ ಕಲಹಗಳು ಮತ್ತು ದಾಂಪತ್ಯ ಪ್ರಕಾರದ ಸಂಬಂಧಗಳ ಹಿಂಸಾತ್ಮಕ ಪರಿಣಾಮಗಳ ಬಗ್ಗೆ ಮತ್ತೆ ಜನಮನದಲ್ಲಿ ಆತಂಕ ಮೂಡಿಸಿದೆ. ಅಧಿಕಾರಿಗಳು ಆರೋಪಿಯನ್ನು ಭಾರತದಿಂದ ಹಸ್ತಾಂತರಿಸುವ ಕ್ರಮಗಳತ್ತ ಮುಂದಾಗಿದ್ದಾರೆ.





