
ಬೆಂಗಳೂರು ಗ್ರಾಮಾಂತರ: ಹೊಸ ವರ್ಷಾಚರಣೆಯಂತ ಮಹತ್ವದ ಸಮಯದಲ್ಲಿ ಜನರ ಸುರಕ್ಷತೆಯ ಹೊಣೆ ಹೊತ್ತ ನೆಲಮಂಗಲ ಪೊಲೀಸರು ಕರ್ತವ್ಯಕ್ಕೂ ಮೀರಿದ ಕಾರ್ಯದಲ್ಲಿ ತೊಡಗಿಕೊಂಡಿದ್ದರೆಂಬ ಆರೋಪ ಸಾರ್ವಜನಿಕರಲ್ಲಿ ಭಾರೀ ಆಕ್ರೋಶ ಉಂಟುಮಾಡಿದೆ.
ಕರ್ತವ್ಯದ ಹೊತ್ತಿನಲ್ಲೇ ಹಾಲಿಡೇ ರೆಸಾರ್ಟ್‌ನಲ್ಲಿ ನಡೆದ ‘ಪೋಲೀಸ್ ಪಾರ್ಟಿ’ ಘಟನೆಯ ವಿಡಿಯೋಗಳು ಮತ್ತು ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ.ಮಾಹಿತಿಯ ಪ್ರಕಾರ, ನೆಲಮಂಗಲ ಟೌನ್ ಠಾಣೆಯ ಸಂಪೂರ್ಣ ಸಿಬ್ಬಂದಿ ನಿವೃತ್ತ ಎಎಸ್‌ಐ ಧನರಾಜ್‌ರ ಬೀಳ್ಕೊಡುಗೆಯ ನೆಪದಲ್ಲಿ ಖಾಸಗಿ ರೆಸಾರ್ಟ್‌ನಲ್ಲಿ ಸಂಭ್ರಮಾಚರಣೆ ನಡೆಸಿದ್ದರು. ಆ ವೇಳೆ ಪೊಲೀಸ್ ಠಾಣೆಯಲ್ಲಿ ಯಾವುದೇ ಅಧಿಕಾರಿಯು ಕರ್ತವ್ಯದಲ್ಲಿರಲಿಲ್ಲ. ದೂರು ನೀಡಲು ಬಂದ ನಾಗರಿಕರು ಠಾಣೆ ಖಾಲಿ ಕಂಡು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಕ್ರೈಂ ದಾಖಲೆಗಳಲ್ಲಿ ರಾಜ್ಯದ ಅಗ್ರ ಸ್ಥಾನದಲ್ಲಿರುವ ನೆಲಮಂಗಲದಲ್ಲಿ ಸಾರ್ವಜನಿಕ ಭದ್ರತೆ ದೊಡ್ಡ ಚಿಂತೆಯಾಗಿರುವ ಸಮಯದಲ್ಲಿ ಇಂತಹ ನಿರ್ಲಕ್ಷ್ಯ ತೋರಿದಿದ್ದಾರೆಂಬುದು ಸಾರ್ವಜನಿಕರ ಅಕ್ರೋಶಕ್ಕೆ ಕಾರಣವಾಗಿದೆ. “ಜನರನ್ನು ರಕ್ಷಿಸಬೇಕಾದವರು ಸ್ವತಃ ಪಾರ್ಟಿಯಲ್ಲಿ ಕುಣಿದು ಕುಪ್ಪಳಿಸುತ್ತಿದ್ದರೆ, ನಂಬಿಕೆ ಯಾರ ಮೇಲಿರಬೇಕು?” ಎಂದು ಸ್ಥಳೀಯರು ಪ್ರಶ್ನಿಸುತ್ತಿದ್ದಾರೆ.
ಪಾಲು ಅಧಿಕಾರಿಗಳು ‘ಹೊಸ ವರ್ಷದ ಬಂದೋಬಸ್ತ್’ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಪೊಲೀಸ್ ಪಡೆಗಳು ಕಾವಲು ಬಿಗಿಗೊಳಿಸಿದ್ದ ತೀವ್ರ ಸಮಯದಲ್ಲೇ, ನೆಲಮಂಗಲ ಮೂಲದ ಅಧಿಕಾರಿಗಳು ಯಾವುದೇ ಯೋಜನೆ ಇಲ್ಲದೆ ವೇದಿಕೆ ಮೇಲೆ ನೃತ್ಯಮಗ್ನರಾಗಿದ್ದರೆಂದು ಮೂಲಗಳು ತಿಳಿಸಿವೆ.ಸಮಯ, ಸಂದರ್ಭ ಮತ್ತು ಸ್ಥಳದ ಆಯ್ಕೆ ಕೂಡಾ ಪೊಲೀಸರ ಜವಾಬ್ದಾರಿಯ ಕೊರತೆಯನ್ನು ಬಯಲುಮಾಡಿದೆ.
ಕರ್ತವ್ಯವನ್ನು ಕೈಬಿಟ್ಟು ಪಾರ್ಟಿ ಮಾಡಿದ ಈ ಘಟನೆ ಈಗ ಪೊಲೀಸ್ ಇಲಾಖೆಯೊಳಗೆ ತನಿಖೆಗೆ ಕಾರಣವಾಗುವ ಸಾಧ್ಯತೆ ಇದೆ.ಜನರ ಸೇವೆಯನ್ನು ಮರೆತು ಸಂಭ್ರಮಾಚರಣೆ ಮಾಡಿದ ನೆಲಮಂಗಲ ಸಿಬ್ಬಂದಿಯ ಈ ನಡೆ, “ಕಾನೂನು ರಕ್ಷಕರು ಸ್ವತಃ ಕಾನೂನು ಮರೆತಿದ್ರೆ, ಸಾರ್ವಜನಿಕರ ನಂಬಿಕೆ ಎಲ್ಲಿ ಉಳಿಯುತ್ತದೆ?” ಎಂಬ ಕಳವಳವನ್ನು ಉಂಟುಮಾಡಿದೆ.





